ಜಲಗಡಿಯಾರ -
ಹರಿದು ಹೋದ ನೀರಿನ ಗಾತ್ರವನ್ನು ಅಳೆದು ಕಾಲಮಾಪನೆ ಮಾಡಲು ಬಳಸುವ ಸಾಧನ (ವಾಟರ್-ಕ್ಲಾಕ್; ಕ್ಲೆಪ್ಸಿಡ್ರ). ತಳದಲ್ಲಿ ಕಿರಿರಂಧ್ರವಿರುವ ಒಂದು ಪಾತ್ರೆಗೆ ನೀರು ತುಂಬಿಸಿಡಬೇಕು; ರಂಧ್ರದ ಮೂಲಕ ಕ್ರಮೇಣ ಹರಿದ ನೀರನ್ನು ಸಂಗ್ರಹಿಸಲು ಅಡಿಯಲ್ಲಿ ಇನ್ನೊಂದು ಪಾತ್ರೆ ಇಡಬೇಕು. ಮೇಲಿನ ಇಲ್ಲವೇ ಕೆಳಗಿನ ಪಾತ್ರೆಯ ನೀರಿನ ಮಟ್ಟವನ್ನು ಅಥವಾ ನೀರಿನ ಗಾತ್ರವನ್ನು ಅಳೆದು ಸಂದಕಾಲವನ್ನು ಗಣಿಸಿವುದು ಇಲ್ಲಿನ ತಂತ್ರ. ಕ್ರಿ.ಪೂ. 1400ರಷ್ಟು ಹಿಂದೆಯೇ ಜಲಗಡಿಯಾರ ಬಳಕೆ ಇದ್ದುದಕ್ಕೆ ಆಧಾರ ದೊರೆತಿವೆ. ಸೂರ್ಯನನ್ನಾಗಲೀ ಆಕಾಶದ ಇತರ ಯಾವುದೇ ವಿದ್ಯಮಾನವನ್ನಾಗಲೀ ಅವಲಂಬಿಸದೆ ಕಾಲವನ್ನು ಸ್ವತಂತ್ರವಾಗಿ ಅಳೆಯುವ ದಿಶೆಯಲ್ಲಿ ಇಟ್ಟ ಮೊದಲ ಹೆಜ್ಜೆ ಜಲಗಡಿಯಾರ. ವೇದಾಂಗ ಜ್ಯೋತಿಷ್ಯದಲ್ಲಿ (ಕ್ರಿ.ಪೂ.ಸು. 400) ಜಲಗಡಿಯಾರದ ಉಲ್ಲೇಖ ಉಂಟು. 

ಸೂರ್ಯಸಿದ್ಧಾಂತದಲ್ಲಿ (ಕ್ರಿ.ಶ.ಸು. 6ನೆಯ ಶತಮಾನ) ಜಲಗಡಿಯಾರದ ವರ್ಣನೆ ಹೀಗಿದೆ: ಅರ್ಧ ಗೋಳಾಕಾರದ ತಾಮ್ರದ ಪಾತ್ರೆ ; ಅದರ ತಳದಲ್ಲಿ ಒಂದು ರಂಧ್ರ ; ಈ ಖಾಲಿ ಪಾತ್ರೆಯನ್ನು ಶುದ್ಧ ನೀರು ತುಂಬಿರುವ ಒಂದು ದೊಡ್ಡ ಬೋಗುಣಿಯೊಳಗೆ ಇಡಬೇಕು; ರಂಧ್ರದ ಮೂಲಕ ನೀರು ಪಾತ್ರೆಯೊಳಗೆ ತುಂಬಿ ಅದು ಮುಳುಗುತ್ತದೆ; ಒಂದು ಹಗಲು ಒಂದು ರಾತ್ರಿಯ ಅವಧಿಯಲ್ಲಿ ಈ ಪಾತ್ರೆ ಹೀಗೆ 60 ಸಲ ಮುಳುಗಿರುತ್ತದೆ.
(ಎಂಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ